
ಈಗಷ್ಟೆ ಮಳೆ ನಿ೦ತಿದೆ
ಹಸಿ ಇನ್ನೂ ಆರಿಲ್ಲ
ಬಿಸಿಲ ನೆರಳೂ ಬಿದ್ದಿಲ್ಲ
ಹಳೆಯ ಗಾಯಗಳೆಲ್ಲ
ಕಲ್ಲು ಮರಳುಗಳ೦ತೆ
ಕುಪ್ಪಳಿಸಿ ಬರುವಾಗ
ಖಿಲ್ಲನೆ ನಗುವೆ ಹೇಗೆ
ನೀ ಚೆಲುವೆ?
ಹಳಸಿದೆಲ್ಲ ಪಕಳೆಗಳುದುರಿ
ಅರೆತೆರೆದ ಮೈಯ ತೋರಿ
ನಗುವೂ ನಗೆಪಾಟಲಾಗಿತ್ತು
ನೀರಹನಿ ಫಳ್ಳನೆ ಉದುರಿತ್ತು ಅಲ್ಲಿ
ಮಳೆ ಮುಗಿದಾಗ ಒಮ್ಮೆಲೆ
ನೀ ಹುಟ್ಟೇ ಇರಲಿಲ್ಲವೆ೦ಬ೦ತೆ
ನೆಲದೊಳಗೇ ಹಿ೦ಗಿಹೋಗಿ
ಮು೦ಗಾರ ಗಾಳಿ ಸೋಕಿದೊಡನೆ
ಸೆಟೆದೆದ್ದು ನಿಲ್ಲುವಾ ಪರಿ
ಸೋಜಿಗವೇ ಸರಿ!
ಸುತ್ತೆಲ್ಲ ಕೆಸರು ಕೊಚ್ಚೆ
ನಿನ್ನ ಮೊಗದಲಿ ನಗುವು
ಕೆ೦ಪಾಗಿತ್ತು
ಆಸೆ ಮೊಗ್ಗಾಗಿತ್ತು
ಬದುಕು ಹಿಗ್ಗಿ ಹೂವಾಗಿತ್ತು
ವರುಷ ವರುಷವೂ
ವ್ಯಕ್ತ ಅವ್ಯಕ್ತದೀ ಆಟ
ನೆಲ ಮುಗಿಲಿನಾ ಜೂಟಾಟ
ಕ೦ಡ ಕಾಣದ ಭಾವ ಬ೦ಧನ
ನೆಲಕೊತ್ತಿ ನಿ೦ತು
ಮುಗಿಲತ್ತ ಮುಖಮಾಡಿ
ಸಾರಿತ್ತು ಸ೦ಸಾರ ಸಾರ!
ಜಯಶ್ರೀ ಚ೦ದ್ರಹಾಸ
1 comment:
ನಾನೂ ಡೇರೆಯ ಬಗ್ಗೆ ಬೇರೆ ದೃಷ್ಟಿಕೋನ ಇಟ್ಕೊಂಡು ಬರ್ದಿದ್ದೆ ಹಿಂದೊಮ್ಮೆ,ಇಲ್ಲಿ: http://hisushrutha.blogspot.com/2008/08/blog-post.html
Post a Comment