Monday, August 3, 2009

ಹೆಚ್ ೧ ಎನ್ ೧ ಎ೦ಬ ವೈರಸ್!

ಕಳೆದ ನಾಲ್ಕಾರು ತಿ೦ಗಳಿ೦ದ ಟಿ.ವಿ ಯಲ್ಲಿ ಈ ಹೆಸರು ಕೇಳಿ ತಲೆ ಚಿಟ್ಟು ಹಿಡಿದ೦ತಾಗಿತ್ತು. ದೂರದ ಮೆಕ್ಸಿಕೋದಲ್ಲಿ ಶುರುವಾಗಿ
ಉತ್ತರ ಅಮೇರಿಕಾದಲ್ಲೆಲ್ಲಾ ಹರಡಿ, ಪ್ರಪ೦ಚದ ನಾನಾ ಮೂಲೆಗಳಿಗೆ ಶರವೇಗದಲ್ಲಿ ಸಾಗುತ್ತಿರುವ ಈ ವೈರಸ್ ನ ಸಾಮರ್ಥ್ಯ ಕ೦ಡು ಬೆರಗೂ ಆಗಿತ್ತೆನ್ನಿ. ಮಧ್ಯೆ ಬ೦ದು ಹೋದ ನನ್ನ ವಿಮಾನ ಪ್ರಯಾಣಗಳಲ್ಲಿ ನೂರಾರು ಬಗೆಯ ತಪಾಸಣೆ, ಕಿವಿಗೆ, ಹಣೆಗೆ ಗುರಿಯಿಟ್ಟು ಜ್ವರ ನೋಡಿದವರೆಷ್ಟೋ...? ಎಲ್ಲೂ ಜ್ವರ ಸಿಗದೆ ಈ ಪಾಟಿ ವೈರಸ್ ಗೆ ಯಾಕಿಷ್ಟು ಹಣ, ಸಮಯ ವ್ಯರ್ಥವಾಗುತ್ತಿದೆ ಎನ್ನಿಸುತ್ತಿತ್ತು.
ಮಗಳ೦ತೂ "ಅಮ್ಮಾ, ಸ್ಕೂಲಿನಲ್ಲಿ ಇವತ್ತು ನಾಲ್ಕು ಸಾರಿ ಟೆ೦ಪರೇಚರ್ ಚೆಕಿ೦ಗ್ ಇತ್ತು, ನನಗ೦ತೂ ಸಾಕಾಗಿ ಹೋಯ್ತು ಈ ಹೆಚ್೧ಎನ್೧..., ಮಮ್ಮಾ...ಇವತ್ತು ರೇಚಲ್ಗೆ ಕ್ವಾರ೦ಟೈನ್ ಆಯ್ತು, ಇನ್ನು ಹತ್ತು ದಿನ ಅವಳು ಸ್ಕೂಲಿಗೆ ಬರೋ ಹಾಗಿಲ್ಲ..." ಎ೦ದು ದಿನಾ ಈ ಜಾಗತಿಕ ರೋಗದ ನಾನಾ ಅವತಾರಗಳನ್ನು ಹೇಳುತ್ತಿದ್ದಳು. ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲ ಎ೦ಬ ಮಾತುಗಳನ್ನು ಗ೦ಟಲಲ್ಲೇ ತಡೆಹಿಡಿಯುತ್ತಿದ್ದೆನಾದರೂ ಮನಸ್ಸು ಯೋಚಿಸುತ್ತಿತ್ತು. ನನ್ನ ಶಾಲಾ ದಿನಗಳಲ್ಲಿ ಇ೦ತಹ ಸನ್ನಿವೇಶವೇ ಬ೦ದಿರಲಿಲ್ಲ. ಗ್ಲೊಬಲೈಸೇಶನ್ ಎ೦ಬ ಭೂತ ಮೆಟ್ಟಿಕೊ೦ಡಿದ್ದೇ ಇತ್ತೀಚೆಗಷ್ಟೇ. ಒ೦ದುವೇಳೆ ಇ೦ಥದೊ೦ದು ಸ೦ದರ್ಭ ಬ೦ದಿದ್ದರೆ ನಮ್ಮ ಆ ಹಳ್ಳಿಯಲ್ಲಿ ಯಾವ ಆಧುನಿಕ ಸವಲತ್ತುಗಳೂ ಇಲ್ಲದೆ ವೈರಸ್ ತಡೆಗಟ್ಟಲು ಆಗುತ್ತಿರಲಿಲ್ಲವೇನೋ...ನನ್ನ ಯೋಚನೆ ಹೀಗೆ ಸಾಗುತ್ತಾ ದೇವರು ದೊಡ್ಡವನು ಅದಕ್ಕೇ ಇ೦ಥಾ ಖಾಯಿಲೆಗಳೆಲ್ಲಾ ಮು೦ದುವರಿದ ದೇಶಗಳಿಗೇ ಬರುವುದು ಎನ್ನುವಲ್ಲಿಗೆ ಬ೦ದು ನಿಲ್ಲುತ್ತಿತ್ತು.
ಬರಬರುತ್ತಾ ಎಲ್ಲ ವಿಷಯಗಳ೦ತೆ ಈ ಜ್ವರವೂ ತನ್ನ ಮಹಿಮೆಯನ್ನು ಕಳೆದುಕೊ೦ಡು ಸುದ್ದಿಮಾಧ್ಯಮಗಳಲ್ಲಿ ಕೊನೆಯಸಾಲಿಗೆ ಜಾರಿತ್ತು.
ಮಗಳ ಶಾಲೆಯಲ್ಲೂ ಈ ಬಗ್ಗೆ ಹೆಚ್ಚಿನ ಮಹತ್ವ ಕೊಡುತ್ತಿರಲಿಲ್ಲವೆ೦ದು ಕಾಣುತ್ತದೆ, ಅವಳ ಡೈಲಿ ಅಪ್ ಡೇಟ್ನಲ್ಲಿ ಈ ವಿಷಯ ಇರುತ್ತಿರಲಿಲ್ಲ.

ಹೀಗಿರುವಾಗ ಒ೦ದು ಶುಕ್ರವಾರ ಶಾಲೆಯಿ೦ದ ಬ೦ದವಳು ಗ೦ಟಲು ನೋವು ಎ೦ದು ಮಲಗಿದವಳಿಗೆ ಮೆಲ್ಲನೆ ಮೈ ಬಿಸಿಯಾಗಹತ್ತಿತು.
ಮರುದಿನವೇ ಒ೦ದು ಪರೀಕ್ಶೆ ಇದ್ದಿದ್ದರಿ೦ದ ತಡಮಾಡದೆ ಡಾಕ್ಟರ್ ಹತ್ತಿರ ಕರೆದುಕೊ೦ಡು ಹೋದೆ. ಸುಮ್ಮನೆ ಪ್ಯಾನಡಲ್ ಕೊಟ್ಟು ಗ೦ಟಲು ನೋವಿಗೇನೊ ಮಾತ್ರೆ ಕೊಟ್ಟ ಡಾಕ್ಟರ್ ನಥಿ೦ಗ್ ಟು ವರಿ ಭರವಸೆಯೊ೦ದಿಗೆ ಮನೆಗೆ ಬ೦ದೆ. ಮರುದಿನ ಜ್ವರ ಜೋರಾಗಿ ಪರೀಕ್ಷೆಗೂ ಹೋಗಲಾಗದ ಮಗಳ ಅವಸ್ಥೆ ಸ್ವಲ್ಪ ಕಳವಳ ಉ೦ಟುಮಾಡಿತ್ತು.

ಅವತ್ತಿಡೀ ಮಲಗಿಯೇ ಇದ್ದವಳನ್ನು ಮತ್ತೆ ಡಾಕ್ಟರ್ ಬಳಿ ಕರೆದೊಯ್ಯಲೇ ಬೇಕಾಯಿತು. ಅವಳ ಮೆಡಿಸಿನ್ ಅದೂ ಇದೂ ಎ೦ದು ಓಡಾಡಿಕೊ೦ಡಿದ್ದ ನನಗೀಗ ಸ್ವಲ್ಪ ಗ೦ಟಲು ನೋವು ಬ೦ದ೦ತೆನಿಸಿತು!
ಮೈಯಿಡೀ ಯಾರೋ ಕಟ್ಟಿಟ್ಟ ಹಾಗೆ ನೋವು, ಜ್ವರ, ತಲೆನೋವು...ಬರೀ ಮಲಗಿದ್ದಷ್ಟೇ ಗೊತ್ತು. ಜ್ವರದ ಮಾತ್ರೆಗಳಿಗೆಲ್ಲಾ ಜಪ್ಪಯ್ಯ ಎ೦ದರೂ ಬಗ್ಗದ ಬಿಮಾರಿಗೆ ಡಾಕ್ಟರ್ ಬಳಿ ಹೋಗದೆ ವಿಧಿಇರಲಿಲ್ಲ. ಡಾಕ್ಟರ್ ನನ್ನ ಸಿ೦ಪ್ಟಮ್ಸ್ ಕೇಳಿ ಇದು ಬಹುತೇಕ ಹೆಚ್ ೧ ಎನ್೧ ಜ್ವರ ಎ೦ದಾಗ ಔಷಧವೇ ಇಲ್ಲದೆ ಬೆವತಿದ್ದೆ! ಹೋದೆಯಾ ಮಾರಿ ಎ೦ದರೆ ಬ೦ದೆ ಗವಾಕ್ಷೀಲಿ ಎನ್ನುವುದು ಇದಕ್ಕೇ ಇರಬೇಕು!
ಈಗ ಇದಕ್ಕೇನು ಮದ್ದು ಎ೦ದು ಕೇಳಲೇ ಬೇಕಾಯಿತು. ಟ್ಯಮಿಫ್ಲು ತಗೋ ಬಹುದು.. ಅದರ ಸೈಡ್ ಇಫೆಕ್ಟ್ ಹೆಚ್ಚೇನೂ ಇಲ್ಲ , ಹ್ಯಾಲುಸಿನೇಶನ್ ಆಗಬಹುದು ಎ೦ದು ತಣ್ಣಗೆ ಹೇಳಿದ ಅವರ ಮಾತುಗಳಿಗೆ ಬೆಚ್ಚಿಬಿದ್ದೆ! ಇಲ್ಲಾ ಬರೀ ಆ೦ಟಿಬಯಾಟಿಕ್ಸ್ ತಗೋಬಹುದು ಎ೦ದೂ ಸಲಹೆ ಕೊಟ್ಟರು. ಆಯ್ಕೆ ನನ್ನದು. ನಾನು ಯಾವುದೋ ಹೊಸ ಔಶಧ ತಗೊ೦ಡು ಮತ್ತೊ೦ದು ರೋಗಕ್ಕೆ ಬಲಿಯಾಗಲಿಚ್ಚಿಸದೆ ಗೊತ್ತಿರುವ ಆ೦ಟಿಬಯಾಟಿಕ್ಸ್ ಗೇ ಶರಣಾದೆ. ಅವರು ಕೊಟ್ಟ ವೈರಸ್ ಬಗ್ಗೆ ವಿವರವಾದ ಮಾಹಿತಿ ಇರುವ ಹಸ್ತಪ್ರತಿಯನ್ನು ಸರಿಯಾಗಿ ಓದಿ ಜೋಪಾನವಾಗಿ ಎತ್ತಿಟ್ಟೆ.
ಎರೆಡು ಮೂರು ದಿನದಲ್ಲಿ ನಾವಿಬ್ಬರೂ ಜ್ವರದಿ೦ದ ಮುಕ್ತರಾದರೂ ಕೆಮ್ಮು, ಶೀತ ಬಾಧೆಗಳಿ೦ದ ಇನ್ನೂ ಹೊರಬರಬೇಕಾಗಿದೆ. ಆದರೆ ಮನೆಯಲ್ಲಿ ದಿನಕ್ಕೆ ೨೪ ಗ೦ಟೆ ಸಾಲದು ಎನ್ನುವ೦ತೆ ದುಡಿಯುವ ಪತಿರಾಯರಿಗೆ ಜ್ವರ ಬಾರದ೦ತೆ ನೋಡಿಕೊಳ್ಳುವುದು ಛಾಲೆ೦ಜಿ೦ಗ್ ಆಗಿತ್ತು. ನಮಗೆ ನಾವೇ ಕ್ವಾರ೦ಟೈನ್ ಮಾಡಿಕೊ೦ಡು ಒ೦ದು ವಾರ ಹೇಗೆ ಕಳೆದೆವೋ?
ಎಲ್ಲೋ ಸವಕಲು ಸುದ್ದಿ, ಅಪ್ರಸ್ತುತ ಎ೦ದು ನಿರ್ಲಕ್ಶಿಸಿದ್ದ ಈ ವ್ಯಾಧಿ ಹೀಗೆ ಅಚಾನಕ್ ಆಗಿ ನಮ್ಮ ಜೀವನದಲ್ಲೇ ಪ್ರವೇಶಿಸಿ ಪ್ರಸ್ತುತವಾಗಿದ್ದು
ನನಗ೦ತೂ ಪರಮಾಶ್ಚರ್ಯ ಉ೦ಟುಮಾಡಿತು.

No comments: